ವನಿಲ -
	ಆರ್ಕಿಡೇಸೀ ಕುಟುಂಬಕ್ಕೆ ಸೇರಿದ ಬಳ್ಳಿ. ಇದರಲ್ಲಿ ವನಿಲಿನ್ ಎಂಬ ಸುಗಂಧಯುಕ್ತ ರಾಸಾಯನಿಕವಿರುವುದರಿಂದ ಇದೊಂದು ಲಾಭದಾಯಕ ಸಂಬಾರ ಸಸ್ಯವಾಗಿದೆ. ಆಫ್ರಿಕಖಂಡದ ದಕ್ಷಿಣ ದೇಶಗಳು, ಮೆಕ್ಸಿಕೋ ಹಾಗೂ ಶ್ರೀಲಂಕಾದ ಉಷ್ಣ ಹವೆಗಳಲ್ಲಿ ಬೆಳೆಯುತ್ತದೆ. ಇದುವರೆಗೂ ಭಾರತಕ್ಕೆ ಆಮದಾಗುತ್ತಿತ್ತು, ಈಚೆಗೆ ಇಲ್ಲಿಯೂ ಇದರ ಕೃಷಿಯನ್ನು ಆರಂಭಿಸಲಾಗಿದೆ.
	ವನಿಲ ಬಳ್ಳಿ ಬಲು ತೆಳು. ಮರದ ಕಾಂಡವನ್ನು ಆಧರಿಸಿ ಮೇಲಕ್ಕೆ ಹಬ್ಬುತ್ತದೆ. ಬಳ್ಳಿ ಸುಗಂಧಮಯವಾಗಿರುತ್ತದೆ. ಎಳೆಯ ಬಳ್ಳಿಗಳನ್ನು ಸು. 15 ಸೆಂಮೀ ಉದ್ದ ಕತ್ತರಿಸಿ ಅವನ್ನು ಮರಗಳ ಬುಡದಲ್ಲಿ ನಾಟಿ ಮಾಡುವರು. ಬೆಳೆಯುತ್ತಿದ್ದಂತೆ ಅದು ಸುವಾಸನೆ ಬೀರತೊಡಗುತ್ತದೆ. ವನಿಲ ಬೀಜಗಳ ಸುತ್ತ ಮೆತ್ತಗಿರುವ ಹಣ್ಣಿನ ತಿರುಳಿದೆ. ಇದರಲ್ಲಿ ವನಿಲಿನ್ ಉಂಟು. ಕಾಯಿ ಬೆಳೆಯುತ್ತಿದ್ದಂತೆ ತಿರುಳು ಚಾಕೊಲೇಟ್ ಬಣ್ಣಕ್ಕೆ ತಿರುಗುತ್ತದೆ. ವನಿಲಿನ್ ಸಣ್ಣ ಹರಳುಗಳ ರೂಪದಲ್ಲಿ ಬೀಜಗಳ ಮೇಲೆ ಕಾಣಿಸಿಕೊಂಡರೆ ವನಿಲಕ್ಕೆ ಉತ್ತಮ ಬೆಲೆ ದೊರೆಯುತ್ತದೆ. ಇತ್ತೀಚೆಗೆ ಸಕ್ಕರೆಯಿಂದ ಎಲೆಕ್ಟ್ರೊಲಿಟಿಕ್ ವಿಧಾನದ ಮೂಲಕ ಕೃತಕವಾಗಿ ವನಿಲಿನನ್ನು ತಯಾರಿಸಲಾಗುತ್ತಿದೆ.

	ವನಿಲ ಸಸ್ಯದಲ್ಲಿ ವನಿಲಿನ್ ಜೊತೆಗೆ ಕ್ಯಾಲ್ಸಿಯಮ್, ಜೀವಸತ್ತ್ವ ಎ,ಸಿ,ಡಿಗಳು, ಪಿಷ್ಟ, ಸಾರಜನಕ ವಸ್ತುಗಳು, ಕೊಲೆಸ್ಟಿರಾಲ್‍ಗಳೂ ಇವೆ. ವನಿಲದಿಂದ, ವನಿಲಾಲ್, ವನಿಲಾಮ್ಲ, ಈಥೈಲ್ ವನಿಲ, ವನಿಲ ಆಹರಿತ ವಸ್ತು, ವನಿಲ ಟಿಂಚರ್, ವನಿಲ ಓಲಿಯೋರೆಸಿನ್, ವನಿಲ ಪುಡಿ ಮುಂತಾದ ಉಪವಸ್ತುಗಳನ್ನು ತಯಾರಿಸುತ್ತಾರೆ.

	ವನಿಲ ಸಾರ ಅಥವಾ ಪುಡಿಯನ್ನು ಕೇಕ್, ಕಡುಬು, ಕ್ರೀಮ್, ಐಸ್‍ಕ್ರೀಮ್, ಸಾಸ್, ಮೊಟ್ಟೆಯಿಂದ ಸಿದ್ಧಗೊಳಿಸುವ ತಿನಿಸು ಮುಂತಾದವುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಇದರಲ್ಲಿರುವ ವನಿಲಿನ್ ಘಟಕ ಆಹಾರ ಪದಾರ್ಥಗಳಿಗೆ ಸುಗಂಧವನ್ನೂ ರುಚಿಯನ್ನೂ ನೀಡುತ್ತದೆ. ಸಕ್ಕರೆ ಹಾಗೂ ಗ್ಲಿಸರಿನ್‍ನಿಂದ ತಯಾರಿಸಿದ ಸಿಹಿತಿಂಡಿಗಳಿಗೂ ವನಿಲಿನ್ ಸಾರವನ್ನು ಬಳಸುತ್ತಾರೆ. ಓಲಯೊರೆಸಿನ್ ಹಾಗೂ ವನಿಲಸಾರಗಳ ಮಿಶ್ರಣವನ್ನು ಔಷಧದ ತಯಾರಿಕೆಗೆ ಉಪಯೋಗಿಸುತ್ತಾರೆ. ಗಾಳಿಯನ್ನು ಶುದ್ಧಪಡಿಸಲು, ಕೊಠಡಿಗಳಲ್ಲಿ ದುರ್ವಾಸನೆ ಹೋಗಲಾಡಿಸಲು ಉಪಯೋಗಿಸುವ ವಸ್ತುಗಳಲ್ಲಿ, ಮೊಂಬತ್ತಿ, ಶಾಂಪೂ, ಸ್ನಾನದ ಸಾಬೂನುಗಳ ತಯಾರಿಕೆಯಲ್ಲಿ ವನಿಲಿನ್ ಬಳಕೆಯುಂಟು. ಕಾಮೋದ್ರೇಕ ಉಂಟುಮಾಡುವ ವಾಜೀಕರಣ ಗುಣವೂ ಇದಕ್ಕಿದೆ ಎನ್ನಲಾಗಿದೆ.	
	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
											(ಎಸ್.ಕೆ.ಎಚ್.)